ಆಂಸ್ಟರ್‍ಡ್ಯಾಮ್

	1 ನೆದರ್‍ಲೆಂಡಿನ ಅತಿ ದೊಡ್ಡ ನಗರ. ರಾಜಧಾನಿಯಾಗಿದ್ದರೂ 30 ಮೈ. ದೂರದಲ್ಲಿರುವ ಹೇಗ್ ನಗರದಲ್ಲಿ ಸರ್ಕಾರದ ಕಚೇರಿಗಳಿವೆ. ಪ್ರಪಂಚದ ನಾನಾ ದೇಶಗಳೊಡನೆ ವ್ಯಾಪಾರ ಸಂಪರ್ಕವನ್ನಿಟ್ಟುಕೊಂಡು ಯೂರೋಪಿನ ಮುಖ್ಯ ವಾಣಿಜ್ಯ ಕೇಂದ್ರಗಳಲ್ಲೊಂದಾಗಿದೆ. ಉತ್ತರ ಸಮುದ್ರದ ಕಾಲುವೆಯ ಮೂಲಕ ನಾವೆಯ ಅನುಕೂಲತೆ ಹೊಂದಿರುವ ರೇವುಪಟ್ಟಣ. ಉಷ್ಣವಲಯದ ಸಾಮಗ್ರಿಗಳಾದ ಕಾಫಿ, ಹೊಗೆಸೊಪ್ಪು, ರಬ್ಬರ್, ಕೋಕೊ, ಗಟ್ಟಿಮರದ ಸಾಮಾನುಗಳು ಇಲ್ಲಿಂದ ರಫ್ತಾಗುತ್ತವೆ. ವಜ್ರ ಕಲ್ಲುಗಳನ್ನು ಕತ್ತರಿಸುವುದಕ್ಕೆ ಮತ್ತು ಹೊಳಪು ಮಾಡುವುದಕ್ಕೆ ಪ್ರಪಂಚದಲ್ಲಿ ಒಂದು ಪ್ರಮುಖ ಕೇಂದ್ರವಾಗಿದೆ. ಜೈಡರ್ ಜೀ ಸಮದ್ರ ಮಟ್ಟಕ್ಕಿಂತ ತಗ್ಗಾಗಿರುವುದರಿಂದ ನಗರವನ್ನು ಗುಡ್ಡಗಳ ಮೇಲೆ ಕಟ್ಟಲಾಗಿದೆ. ಅದರ ನಾನಾ ಭಾಗಗಳಲ್ಲಿ ಅನೇಕ ಸೇತುವೆಗಳೂ 17 ಮತ್ತು 18 ಶತಮಾನದ ಪ್ರಮುಖ ಕಟ್ಟಡಗಳೂ ಇವೆ. ಈ ನಗರ 1370ರಲ್ಲಿ ಹ್ಯಾನ್ಸಿಯಾಟಿಕ್ ಒಕ್ಕೂಟವನ್ನು ಸೇರಿತು. ಇದು ಸ್ಪಿನೊಜನ ಜನ್ಮಸ್ಥಳ. ರೆಂಬ್ರಾನ್‍ನ ವಾಸಸ್ಥಾನ. ಇಲ್ಲಿ ಒಂದು ವಿಶ್ವವಿದ್ಯಾನಿಲಯವಿದೆ. 

	2 ಅಮೆರಿಕದ ಸಂಯುಕ್ತಸಂಸ್ಥಾನದ ನ್ಯೂಯಾರ್ಕ್ ಪ್ರಾಂತ್ಯದ ಒಂದು ಪಟ್ಟಣ. ಈರಿ ಮತ್ತು ಆಂಟೇರಿಯೊ ಸರೋವರಗಳ ಕಡೆ ರೈಲು, ರಸ್ತೆಗಳ ಸಂಪರ್ಕವಿದೆ. ಸಮೀಪದಲ್ಲಿ ಮೊಕಾವ್ಕ್ ನದಿ ಹರಿಯುವುದು. ಹೆಚ್ಚಾಗಿ ಹಾಲೆಂಡನಿಂದ ವಲಸೆ ಬಂದ ಜನ ವಾಸಿಸುತ್ತಾರೆ.

	3 ಹಿಂದೂ ಮಹಾಸಾಗರದ ದಕ್ಷಿಣ ಭಾಗದಲ್ಲಿ ಸೇಂಟ್ ಪಾಲ್ ದ್ವೀಪಕ್ಕೆ ಸಮೀಪದಲ್ಲಿರುವ ಒಂದು ದ್ವೀಪ. ಫ್ರಾನ್ಸಿಗೆ ಸೇರಿದೆ.

(ಎಂ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ